Tuesday, April 23, 2013

ಸೂತಕದ ಛಾಯೆ !!!

ತಾಯಿ ಭ್ರೂಣದಿಂದ
ಹೊರಬಂದ ಹಸುಗೂಸು
ಪಾಪ,
ಏನೂ ತಿಳಿದಿರದು, ದೇವರಂತ ಮನಸು
ಹೊಸ ಜಗತ್ತಿನೊಳ್ ಬಿಟ್ಟಿತು ಕಣ್ಣ
ಅದಕ್ಕೂ ಅಂಟಿಸಿದರು ಸೂತಕದ ಹೂರಣ.
ಓ ಮೂಢ,ಜನನ ಸೂತಕ ಅಲ್ಲ
ಅದು ಹೊಸ ಜೀವದ ಮೊದಲ ಉಸಿರು

ಮುಟ್ಟು ಕಂಡವಳನ್ನು ಹೊರಗಿರಿಸಿದಿರಿ,
ದೇವರ ಕೋಣೆಗೂ ಕಾಲಿರಿಸದಂತೆ
ಸ್ತೋತ್ರವ ಪಠಿಸದಂತೆ..
ಕಾಣುವಿರಿ ಪಶುವಿನಂತೆ..
ಮುಟ್ಟು ನಿಲ್ಲದ ಹೊರತು
ಹುಟ್ಟದು ಇನ್ನೊಂದು ಜೀವ.
ಓ ಮೂಢ,ರಜ ಸೂತಕ ಅಲ್ಲ
ಅದೊಂದು ಜೈವಿಕ ಕ್ರಿಯೆ

ಹೆಣದ ಮೇಲಿನ ಒಡವೆಯ ಧರಿಸುವಿರಿ,
ಹೆಣಕ್ಕೂ ನೀರೆರೆಯುವಿರಿ,
ಪೂಜೆಯ ಗೈಯ್ಯುವಿರಿ, ಉಸಿರಿಲ್ಲದ ದೇಹಕ್ಕೂ....
ವಿಗ್ರಹಕ್ಕೂ ಮಿಗಿಲಾಗಿ ಅಲಂಕರಿಸುವಿರಿ...
ಆದರೂ ಮನದ ಮೂಲೆಯಲ್ಲಿ ಸೂತಕದ ಬಿಂಬ
ಓ ಮೂಢ, ಸಾವು ಸೂತಕ ಅಲ್ಲ
ಅದು ಅವನ ಅಂತ್ಯ

ಓ ಮರುಳ ಮನಸೇ,
ಜನನ ಸೂತಕವಲ್ಲ
ರಜ ಸೂತಕವಲ್ಲ
ಸಾವು ಸೂತಕವಲ್ಲ
ಇವೆಲ್ಲ ಪ್ರಕೃತಿಯ ನಿಯಮವಷ್ಟೇ ...
ಸೂತಕ ಸೂತಕ ಎನ್ನುವ ನಿನ್ನ ಮನಸೇ ಸೂತಕ ನೋಡಾ !!!

Friday, April 5, 2013

ಮತ್ತೆ ಮತ್ತೆ ತೇಜಸ್ವಿ !!!

ಏಪ್ರಿಲ್ ೫,ಪೂರ್ಣಚಂದ್ರ ತೇಜಸ್ವಿ ಅವರ ಸಂಸ್ಮರಣಾ ದಿನ ... ಈ ದಿನದ ಅಂಗವಾಗಿ "ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜೀವ ವೈವಿಧ್ಯ ಸಂಶೋಧನಾ ಕೇಂದ್ರ ಮತ್ತು ವಿಸ್ಮಯ ಪ್ರತಿಷ್ಠಾನ,ಕೊಟ್ಟಿಗೆಹಾರ" ಸಂಸ್ಥೆಯು ಒಂದು ದಿನದ ಚಾರಣ ಕಾರ್ಯಕ್ರಮವನ್ನು ಮೂಡಿಗೆರೆ ತಾಲ್ಲೂಕಿನ ಕುಂದೂರು ಬಳಿಯ ಬೇಟೆರಾಯನಕೋಟೆಯಲ್ಲಿ ಮಾರ್ಚ್ ೨೯,೨೦೧೩ ರಂದು  ಹಮ್ಮಿಕೊಂಡಿತ್ತು...
ಕೊಟ್ಟಿಗೆಹಾರದ ವಿಸ್ಮಯ ಪ್ರತಿಷ್ಠಾನದ ಕಛೇರಿಯಲ್ಲಿ ತೇಜೋಮಯ ತೇಜಸ್ವಿ


ಈ ಚಾರಣ ಕಾರ್ಯಕ್ರಮಕ್ಕೆ ನಾಡಿನ ವಿವಿದೆಡೆಯಿಂದ ಚಾರಣ ಪ್ರಿಯರು,ಪರಿಸರ ಪ್ರಿಯರು,ಛಾಯಾಗ್ರಾಹಕರು,ವಿಸ್ಮಯ ಪ್ರತಿಷ್ಠಾನದ ಸದಸ್ಯರು,ತೇಜಸ್ವಿ ಅವರ ಸ್ನೇಹಿತರು ಮತ್ತು ಒಡನಾಡಿಗಳು ಮತ್ತು ತೇಜಸ್ವಿ ಅವರ ಅಭಿಮಾನಿಗಳು ಭಾಗವಹಿಸಿದ್ದರು.. ಈ ಕಾರ್ಯಕ್ರಮವು ಬೆಳಗ್ಗೆ ಮೂಡಿಗೆರೆ ಇಂದ ಹೊರಟು  ಕುಂದೂರು ತಲುಪಿ ಅಲ್ಲಿಂದ ಬೇಟೆರಾಯನಕೋಟೆಗೆ ನಮ್ಮ ತಂಡ  ಸಾಗಿತು..


ಬೇಟೆರಾಯನಕೋಟೆ
ಬೇಟೆರಾಯನಕೋಟೆ: ಇದು ಪಶ್ಚಿಮ ಘಟ್ಟದ ಸಾಲಿನಲ್ಲಿ ಬರುವ ಒಂದು ಪ್ರದೇಶ ... ಇಲ್ಲಿ ಮುಂಚೆ ಒಬ್ಬ ಪಾಳೆಗಾರ ಆಳುತ್ತಿದ್ದನು ಎಂಬ ಮಾಹಿತಿ ಇದೆ .. ಹೊಯ್ಸಳರ ಮೂಲ ಕೂಡ ಪಶ್ಚಿಮ ಘಟ್ಟದ ಪ್ರದೇಶ ಆದ್ದರಿಂದ ಈ ಕೋಟೆಯೂ ಕೂಡ ಹೊಯ್ಸಳರ ಆಳ್ವಿಕೆಯಲ್ಲಿ ಕಟ್ಟಲ್ಪಟ್ಟಿರಬಹುದು .. ಇದೆ ಬೆಟ್ಟಗಳ ಸಾಲಿನಲ್ಲಿ ಬರುವ ಬಲ್ಲಾಳರಾಯನದುರ್ಗದಲ್ಲಿರುವ ಕೋಟೆ  ಕೂಡ ಹೊಯ್ಸಳರ ದೊರೆ ನರಸಿಂಹ ಬಲ್ಲಾಳ ಕಟ್ಟಿಸಿದ್ದು .. ಆಗಾಗಿ ಇದು ಕೂಡ ಅವರ ಕೆಳಗಿದ್ದ ಯಾರಾದರು ಪಾಳೆಗಾರ ಕಟ್ಟಿಸಿರಬಹುದು ಎಂದು ಊಹಿಸಬಹುದು ಅಷ್ಟೇ ..ಸಧ್ಯದ ಪರಿಸ್ಥಿತಿಯಲ್ಲಿ ಇಲ್ಲಿ ಕೋಟೆಯ ಕುರುಹು ಕಾಣುತ್ತದೆ ಅಷ್ಟೇ ...

ಅಂದ ಹಾಗೆ ಇಲ್ಲಿ ಇತ್ತೀಚಿಗೆ ಆನೆಗಳ ಹಾವಳಿ ಕೂಡ ಜಾಸ್ತಿ ಎಂದು ಸ್ಥಳೀಯರು ಹೇಳಿದರು ...
ಚಾರಣದ ಹಾದಿಯಲ್ಲಿ

ಬೇಟೆರಾಯನಕೋಟೆಯಿಂದ ಕಾಣುವ ಸುತ್ತಮುತ್ತಲ ಗುಡ್ಡಗಳು
 
ಈ ಚಾರಣ ಕಾರ್ಯಕ್ರಮವನ್ನು ಏರ್ಪಡಿಸಿದ್ದ ವಿಸ್ಮಯ ಪ್ರತಿಷ್ಠಾನಕ್ಕೆ ಮನಃ ಪೂರ್ವಕ ಅಭಿನಂದನೆಗಳು ಮತ್ತು ತೇಜಸ್ವಿ ಬದುಕು-ಬರಹ ಚಿಂತನೆಗಳನ್ನು ಪಸರಿಸಲು ಅವರು ಹಮ್ಮಿಕೊಳ್ಳುತ್ತಿರುವ ಎಲ್ಲ ಕಾರ್ಯಕ್ರಮಗಳು ಮತ್ತು ಸಂಸ್ಥೆಯ ಆಶಯಗಳಿಗೆ ಶುಭ ಕೋರುತ್ತೇನೆ.. ಅಲ್ಲದೆ ತೇಜಸ್ವಿ ಬರಹಗಳ ಬಗ್ಗೆ ಚರ್ಚೆಗಳನ್ನು ಕೂಡ ಹಲವಾರು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ...



Photos:Darshan Shindhe